ಕೋಲಶಾಂತಯ್ಯ : -
ಸು. 1160. ವೀರಶೈವ ಅಮರ ಗಣಾಧೀಶ್ವರರ ಪಂಕ್ತಿಯಲ್ಲಿ ಒಬ್ಬನಾಗಿರುವ ಈತ ಹಿರಿಯ ಶರಣ ಹಾಗೂ ವಚನಕಾರ. ಬಸವಣ್ಣ, ಬಿಜ್ಜಳರ ಸಮಕಾಲೀನ. ಬಿಜ್ಜಳನಲ್ಲಿ ಕಟ್ಟಿಗೆ ಅಥವಾ ಕೋಲನ್ನು ಹಿಡಿವ ಕಾಯಕವನ್ನು ನಡೆಸುತ್ತಿದ್ದುದರಿಂದ ಈತನ ಹೆಸರಿನ ಹಿಂದೆ ಕೋಲು ವಿಶೇಷಣವಾಗಿ ಬಂದಿರಬಹುದೆಂದು ಹೇಳಬಹುದಾಗಿದೆ. ವಿವಿಧ ಸಾಹಿತ್ಯ ಮೂಲಗಳಿಂದ ತಿಳಿದು ಬರುವಂತೆ ಈತ `ಚಿತ್ರದ ಜಂಗಮವನಿದವನನಿದ ಪವಾಡದ ವ್ಯಕ್ತಿಯಾಗಿ ತನ್ನ ಮಹಿಮೆಯನ್ನು ಮೆರೆದಿದ್ದಾನೆ. ವಚನ ರಚನೆಯಿಂದ ಸಾಹಿತ್ಯದಲ್ಲಿಯೂ ಹಿರಿಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾನೆ. ಈಗ ದೊರೆತಿರುವಂತೆ ಈತನ ವಚನಗಳ ಸಂಖ್ಯೆ 100. ಇವುಗಳಲ್ಲಿ 64 ಸಾಮಾನ್ಯವಚನಗಳು, 36 ಬೆಡಗಿನ ವಚನಗಳು. ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ ಎಂಬುದು ಈತನ ವಚನಾಂಕಿತ. ಎಲ್ಲ ವಚನಕಾರರಂತೆ ಈತನೂ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಭಕ್ತನಾದವನ ಜಡೆಮುಡಿಗಳು ಎಂತೇ ಇರಲಿ ಆತನ ನಡೆನುಡಿ ಸಿದ್ಧಾಂತವಾದರೆ ಸಾಕು. ಅವನಿಗೆ ಅವಸೋಂಕು ಬಂದರೂ ಭಾವ ಶುದ್ಧವಾಗಿರಬೇಕು.-ಎಂಬಿವೇ ಮೊದಲಾದ ವಿವಿಧ ನೀತಿಗಳನ್ನು ಹಲವಾರು ಉತ್ತಮ ಉಪಮೆಗಳ ಮೂಲಕ ನಿರೂಪಿಸಿದ್ದಾನೆ. ವೇಸಿಯ ಸಂಗ ದ್ರವ್ಯದ ಕೇಡು, ದಾಸಿಯ ಸಂಗ ಮಾನಹಾನಿಗೆ ಮೊದಲು; ಆಂದಣಗಿತ್ತಿಯ ಮಾತು ಬಂದಿಕಾರ ಜಗಳದಂತೆ, ಕಂಡವರಲ್ಲಿ ತಂದು ಮಾಡುವವನ ಮಾಟ ಸಾಕಿ ಕೊಂದಿಹನ ದಯದಂತೆ; ಮಾಡಿ ಆಡಲೇತಕ್ಕೆ, ಸಲಹಿಕೊಲಲೇತಕ್ಕೆ, ಬಿತ್ತಿ ಕೀಳಲೇತಕ್ಕೆ, ಕಟ್ಟಿ ಒಡೆಯಲೇಕೆ? ಮಾಡಿ ಮಾಡಿ ಮನಗುಂದುವ ನೀಡಿ ನೀಡಿ ನಿಜಗುಂದುವಣ ಬೇಡ-ಎಂದು ಹೇಳುವ ಈತನ ನೀತಿ ನಿರೂಪಣೆಯ ಶೈಲಿ ಉತ್ತಮ ಮಟ್ಟದ್ದಾಗಿದೆ.  										(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ